ಓರ್ ಮೀನು: ಎಲ್ಲ ಮಹಾಸಾಗರಗಳಲ್ಲಿಯೂ ಇರುವ ರೀಗೇಲಿಸಿಡೆ ಕುಟುಂಬದ ಮೀನು. ದೇಹ ಪಟ್ಟಿಯಂತೆ ಬಲು ಉದ್ದವಾಗಿದೆ. ಬೆನ್ನಿನ ರೆಕ್ಕೆ ದೇಹದ ಉದ್ದಕ್ಕೂ ವಿಸ್ತರಿಸಿದ್ದು ಇದರ ಮೊದಲ ಕೆಲವು ಎಳೆಗಳು ತಲೆಯ ಮೇಲೆ ನೀಳವಾದ ಶಿಖೆಯಂತೆ ಇವೆ. ನಡುವಿನ ರೆಕ್ಕೆಗಳು ದೀರ್ಘವಾದ ಎಳೆಗಳಾಗಿ ಮಾರ್ಪಟ್ಟು ಕೊನೆಯಲ್ಲಿ ಹುಟ್ಟಿನಂತೆ (ಓರ್) ಚಪ್ಪಟೆಯಾಗಿವೆ. ಇಂಥ ರಚನೆಯಿಂದಲೇ ಇವುಗಳಿಗೆ ಓರ್ (ಹುಟ್ಟು) ಮೀನುಗಳೆಂದು ಹೆಸರು ಬಂದಿದೆ. ಇದೊಂದು ಅಪರೂಪದ ಮೀನು. ಶೀತ ವಲಯದ ಸಮುದ್ರದಲ್ಲಿರುತ್ತವೆ. ಪುರ್ವ ಹಿಂದೂ ಮಹಾಸಾಗರ, ಟಾಸ್ಮಾನಿಯ, ನ್ಯೂಜಿಲಾಂಡ್, ಆಸ್ಟ್ರೇಲಿಯಾಗಳಲ್ಲಿ ಕಂಡುಬರುತ್ತವೆ.

ಕೆಲವು ಓರ್ ಮೀನುಗಳು 10-15 ಮೀ ಉದ್ದ ಬೆಳೆಯುತ್ತವೆ. ಸಾಗರಗಳಲ್ಲಿ ಅಗಾಧವಾದ ಹಾವುಗಳಿರುವುವೆಂಬ ದಂತಕಥೆಗಳು ಈ ಮೀನುಗಳಿಂದ ಹುಟ್ಟಿರಬಹುದೆಂದು ಕಾಣುತ್ತದೆ. ಇದನ್ನು ‘ಹೆರಿಂಗ್ ಮೀನುಗಳ ರಾಜ’ ಎಂದೂ ಕರೆಯುತ್ತಾರೆ. ಈ ಮೀನುಗಳ ಕುರಿತು ಅನೇಕ ದಂತಕಥೆಗಳೂ ನಂಬಿಕೆಗಳೂ ಇವೆ.	(ಸಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ